ಕನ್ನಡಕ್ಕೆ ಮೊದಲು ಬಂದ ಸಾಯಿನಾಥ್ ಕೃತಿ

ಪಿ ಸಾಯಿನಾಥ್ ಮೊದಲ ಬಾರಿ ಕನ್ನಡಕ್ಕೆ ಬಂದಿದ್ದಾರೆ. ಅವರು ರೈತರ ಕುರಿತು ‘ದಿ ಹಿಂದೂ’ ಪತ್ರಿಕೆಗೆ ಬರೆದ ಸರಣಿ ಲೇಖನಗಳಲ್ಲಿ ಕೆಲವನ್ನು ಅನುವಾದ ಮಾಡಿ ಪ್ರಕಟಿಸಲಾಗಿದೆ. ಟಿ ಎಲ್ ಕೃಷ್ಣೇಗೌಡ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು. ಅವರು ಲೇಖನಗಳನ್ನು ಅನುವಾದಿಸಿದ್ದಾರೆ. ‘ಚಿಂತನ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ. ಪುಸ್ತಕಕ್ಕೆ ಕೃಷ್ಣೇಗೌಡ ಅವರು ಬರೆದ ಮಾತುಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

-ಟಿ ಎಲ್ ಕೃಷ್ಣೇಗೌಡ

ಪಿ. ಸಾಯಿನಾಥ್ ಅವರು ಭಾರತೀಯ ಮಾದ್ಯಮಲೋಕದ ಮಿಂಚು. ಆ ಮಿಂಚು ಉಳ್ಳವರ ಸಿರಿವಂತಿಕೆಯನ್ನು ವಿಜೃಂಭಿಸುವ ಅಲಂಕಾರ ದೀಪವಲ್ಲ. ದುಡಿದು-ದಣಿದ ಕೋಟ್ಯಾಂತರ ಮಂದಿಯ ಸಂಕಟವನ್ನು ನೋಡಿದ,ನೋಡುತ್ತಿರುವ ಕಂದೀಲು. ಗ್ಲಾಮರ್ ಜಗತ್ತಿನ ಪ್ರಖರ ಬೆಳಕಿಗೆ ಕಣ್ಣು ಕುಕ್ಕದವರ ಕಣ್ತೆರೆವ ದಾರಿ ತೋರುವ ಹಣತೆ.ಮಾದ್ಯಮರಂಗ ಕಂಪನೀಕರಣಗೊಂಡು ಎಲ್ಲವೂ ಲಾಭಕ್ಕಾಗಿಯೇ ಎನ್ನುವಂತಾಗಿರುವ ಈ ಸಂದರ್ಭದಲ್ಲಿ, ಅಂತಹ ತಾಳಕ್ಕೆ ಹೆಜ್ಜೆ ಇಡುತ್ತಿರುವ ಅಸಂಖ್ಯ ಪತ್ರಕರ್ತರ ನಡುವೆ ಪಿ. ಸಾಯಿನಾಥ್ ಭಿನ್ನ. ಅವರ ಬರಹಗಳು ದಿನಪತ್ರಿಕೆಗಳಲ್ಲಿ ಇಂದಿನ ವಿದ್ಯಮಾನಗಳಿಗೆ ಸ್ಪಂದಿಸುತ್ತಾ, ಇತರ ಅಂದಿನ ತಾಜಾ ಸುದ್ದಿಗಳ ಜತೆ ಸ್ಥಾನ ಗಳಿಸಲು ಪೈಪೋಟಿಯಲ್ಲಿ ಗೆಲ್ಲುತ್ತವೆ. ಆದರೆ ಅವು ಹಲವು ವರ್ಷಗಳ ನಂತರವೂ ಪ್ರಸ್ತುತವಾಗಿದ್ದು ಓದುಗರು ಅವನ್ನು ಹುಡುಕಿಕೊಂಡು ಹೋಗುವಂತೆ ಇರುತ್ತವೆ ಅವರ ಬರಹಗಳು. ಹಾಗಂತ ಅವರ ಬರಹದ ವಸ್ತುಗಳಲ್ಲಿ ವೈವಿಧ್ಯತೆಗೆ ಕಡಿಮೆ ಇಲ್ಲ. ರೈತರ ಬವಣೆಗಳು, ಕೃಷಿ ಬಿಕ್ಕಟ್ಟಿನ ಹಲವು ಆಯಾಮಗಳು, ಸಕರ್ಾರದ ನೀತಿಗಳು, ಬಜೆಟ್, ಚುನಾವಣಾ ವಿಶ್ಲೇಷಣೆ, ಅಮೆರಿಕದ ರಾಜಕೀಯ ಬದಲಾವಣೆ – ಎಲ್ಲಾ ಅವರ ಬರಹಗಳ ವಸ್ತು.

ನಾವು ಈ ಪುಸ್ತಕಕ್ಕೆ ಆರಿಸಿಕೊಂಡಿರುವ ಲೇಖನ-ವರದಿಗಳೂ ಮುಖ್ಯವಾಗಿ ಕೃಷಿ ಬಿಕ್ಕಟ್ಟು ಮತ್ತು ರೈತರ ಬವಣೆಗಳ ಸುತ್ತ ಇರುವವು. ನಮ್ಮ ನಾಡಿನ ಬಹು ಸಂಖ್ಯಾತ ಕೂಲಿಕಾರರ, ರೈತರ, ಕುಶಲಕಮರ್ಿಗಳ ದಾರುಣ ಬದುಕನ್ನು ಕಟ್ಟಿಕೊಟ್ಟಿರುವಂತಹವೇ. ದೇಶದ ಮೂಲೆ-ಮೂಲೆಗಳಲ್ಲಿ ಸಾವಿರಾರು ಮೈಲಿ ತಿರುಗಿ ಜನರ ಸಂಕಷ್ಟಗಳನ್ನು ನೋಡಿ, ಅವರ ಕಣ್ಣೀರು, ನಿಟ್ಟುಸಿರು, ಹತಾಶೆಗಳಿಗೆ ಅಕ್ಷರ ರೂಪ ಕೊಟ್ಟಂತಹವು. ನೀರಿನ ಖಾಸಗೀಕರಣದ ನಂತರ ಒರಿಸ್ಸಾ ರೈತರ ಪಾಡು, ವ್ಯಾಪಾರಿಗಳು- ಸಕರ್ಾರದ ಕಪಿಮುಷ್ಠಿಯಲ್ಲಿ ಹರಿದ ಛತ್ರಿಯಂತಾದ ವಿದರ್ಭದ ಹತ್ತಿಬೆಳೆಗಾರರು, ಬೊಗಸೆ ನೀರಿಗಾಗಿ ಭೂಮಿಯನ್ನೆಲ್ಲಾ ತೂತು ಮಾಡಿ ಹತಾಶರಾದ ಆಂದ್ರದ ರೈತರು, ದೇವಸ್ಥಾನಗಳ ಕಾಣಿಕೆ ಸಲ್ಲಿಸಲೂ ಶಕ್ತರಲ್ಲದ ವಯನಾಡಿನ ಮೆಣಸು-ಬೆಳೆಗಾರರು… ಹೀಗೆ ಸಾಯಿನಾಥ್ ಅವರು ಸಮಸ್ಯೆಗಳನ್ನು ಗಾಜಿನ ಮನೆಯಿಂದ ನೋಡದೆ ಅಲ್ಲಿಗೇ ಹೋದರು, ಅನುಭವಿಸಿದರು, ಬರೆದರು. ಈ ಲೇಖನಗಳು ಬೇರೆ-ಬೇರೆ ಸಂದರ್ಭದಲ್ಲಿ, ಕೆಲವು ಬಹಳ ಹಿಂದೆ ಪ್ರಕಟವಾದದ್ದಾದರೂ ಅವುಗಳನ್ನು ಅನುವಾದಿಸಲು ಆರಿಸಿಕೊಂಡ ಕಾರಣ ಅವುಗಳಿಗಿರುವ ಪ್ರಸ್ತುತತೆ.

ಪಿ. ಸಾಯಿನಾಥ್ರವರ ಇಂಗ್ಲೀಷ್ ಬರಹಗಳನ್ನು ಓದುವಾಗ ಎಷ್ಟೊಂದು ಸರಳವಾಗಿದೆ ಅನಿಸುತ್ತದೆ. ಆದರೆ ಹರಿತವಾದ, ನಿಖರವಾದ ಮಂಡಣೆ, ಮೊನಚಾದ ವ್ಯಂಗ್ಯ, ಶಬ್ದಗಳ ಕಸರತ್ತಿನಲ್ಲಿ ಹೊಸ ಅರ್ಥ ಹೊರಡಿಸುವ ಅವರ ಶೈಲಿ ಸಂಕೀರ್ಣ. ಅವರ ಲೇಖನವನ್ನು ಯಥಾವತ್ತಾಗಿ ಕನ್ನಡಕ್ಕೆ ಭಾಷಾಂತರಿಸುವುದು ಕಷ್ಟ. ಹೆಚ್ಚು ಕಡಿಮೆ ಅಸಾಧ್ಯ ಎನ್ನಬಹುದು. ಆದ್ದರಿಂದ ಅವರ ಬರಹಗಳನ್ನು ಕನ್ನಡಕ್ಕೆ ತರುವಾಗ ಭಾವಾನುವಾದದ ಮಾರ್ಗ ಹಿಡಿದಿದ್ದೇನೆ. ವಾಕ್ಯವಾರಾಗಿ ಅನುವಾದಕ್ಕೆ ನಿಲ್ಲದೆ ಅವರ ಹೇಳಿಕೆಯ ತಿರುಳನ್ನು ಕನ್ನಡದಲ್ಲಿ ಅದರ ಮೂಲ ಭಾವಕ್ಕೆ ಚ್ಯುತಿ ಬರದಂತೆ ಸೆರೆ ಹಿಡಿಯಲು ಪ್ರಯತ್ನಿಸಿದ್ದೇನೆ. ಕೆಲವು ದಿನಗಳಲ್ಲಿ ಮಾಡಿ ಮುಗಿಸಿ ಬಿಡುತ್ತೇನೆ ಎಂದು ಕೊಂಡದ್ದು ತಿಂಗಳುಗಳು ತೆಗೆದುಕೊಂಡಿತು.

ಹಲವು ಬಾರಿ ಬರೆದ್ದನ್ನು ತಿದ್ದಬೇಕಾಯಿತು. ಇವೆಲ್ಲದರ ನಂತರ ಪಿ. ಸಾಯಿನಾಥ್ರವರ ಭಾವವನ್ನು ಕನ್ನಡದಲ್ಲಿ ತರಲು ಎಷ್ಟರ ಮಟ್ಟಿಗೆ ಸಫಲನಾಗಿದ್ದೇನೆ ಎಂದು ಓದುಗರು ಹೇಳಬೇಕು.

ಕೊನೆಯದಾಗಿ, 1998ನೇ ಇಸವಿ, ಮಂಡ್ಯದಲ್ಲಿ ವಿಶ್ವೇಶ್ವರಯ್ಯನವರ ಕುರಿತು ವಿಚಾರ ಸಂಕಿರಣವೊಂದನ್ನು ಸಂಘಟಿಸಲಾಗಿತ್ತು. ಅದರ ಸ್ಮರಣ-ಸಂಚಿಕೆಗೆ ಹಲವು ದಿಗ್ಗಜರು ಇಂಗ್ಲೀಷ್ ಭಾಷೆಯಲ್ಲಿ ಲೇಖನಗಳನ್ನು ಕಳುಹಿಸಿದ್ದರು. ಸ್ಮರಣ ಸಂಚಿಕೆಯನ್ನು ಮುದ್ರಿಸುವ ಜವಾಬ್ದಾರಿ ನನ್ನದೇ ಆಗಿದ್ದರಿಂದ ಲೇಖನಗಳ ಅನುವಾದಕ್ಕೆ ಎಷ್ಟು ಪಾಡು ಪಟ್ಟರೂ ಯಾರೂ ಸಿಗಲಿಲ್ಲ. ಈ ವಿಷಯವನ್ನು `ಪ್ರೀತಿಯ ಮಾಸ್ಟ್ರು’ ದಿವಂಗತ ಸಂಗಾತಿ ಪಿ. ರಾಮಚಂದ್ರರಾಯರಿಗೆ ತಿಳಿಸಿ ಸಹಾಯ ಕೇಳಿದಾಗ `ನೀನೇ ಮಾಡು ನೋಡುವ’ ಎಂದು ಹೇಳಿ ಅನುವಾದದ ನೇಗಿಲು ಕಟ್ಟಿಸಿದರು. ಅನುವಾದ ಮಾಡಬಲ್ಲೆ. ಕನ್ನಡದಲ್ಲಿ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ತುಂಬಿದ ಪಿ.ರಾಮಚಂದ್ರರಾಯರಿಗೆ ನನ್ನ ಅನಂತ ಧನ್ಯವಾದಗಳು. ಅದರ ನಂತರ ಹಲವು ಲೇಖನ ವರದಿಗಳನ್ನು ಬರೆಯುತ್ತಾ ಬಂದಿದ್ದೇನೆ. ಚಿಂತನ ಪುಸ್ತಕ ರೈತರ ಬವಣೆ ಮತ್ತು ಕೃಷಿ ಬಿಕ್ಕಟ್ಟಿನ ಬಗೆಗಿನ ಪಿ.ಸಾಯಿನಾಥರ ಲೇಖನಗಳನ್ನು ಆಯ್ಕೆ ಮಾಡಿ ಕನ್ನಡಕ್ಕೆ ತರಲು ಕೇಳಿಕೊಂಡಾಗ ಭಯ, ಸಂಭ್ರಮ ಎರಡೂ ಆಯ್ತು. ಒಂದು ಸವಾಲನ್ನಾಗಿ ಸ್ವೀಕರಿಸಿ ಅದರಲ್ಲಿ ತೊಡಗಿಸಿಕೊಂಡೆ. ರೈತ ಚಳುವಳಿಯಲ್ಲಿ ತೊಡಗಿಸಿ ಕೊಂಡಿರುವ ನನಗೆ ಇದು ನನ್ನ ಕರ್ತವ್ಯ ಸಹ ಎನ್ನಿಸಿತು. ಕೃಷಿ ಬಿಕ್ಕಟ್ಟಿನ ಹಲವು ಆಯಾಮಗಳ ಬಗ್ಗೆ, ರೈತರ ಬವಣೆಗಳ ಬಗ್ಗೆ, ಅದರ ಹಿಂದಿರುವ ತಪ್ಪು ಕೃಷಿ ನೀತಿಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳ ತೀವ್ರ ಕೊರತೆಯನ್ನು ಸ್ವಲ್ಪ ಮಟ್ಟಿಗಾದರೂ ಈ ಪುಸ್ತಕ ತುಂಬಿದೆ. ಆ ನಿಟ್ಟಿನಲ್ಲಿ ನನ್ನ ಕಿರುಕಾಣಿಕೆ ಬಗ್ಗೆ ನನಗೆ ಹೆಮ್ಮೆ ಎನ್ನಿಸುತ್ತಿದೆ.

ಇದನ್ನು ಪುಸ್ತಕವಾಗಿ ಹೊರ ತರುತ್ತಿರುವ ಚಿಂತನ ಪುಸ್ತಕ ಬಳಗದವರಿಗೆ; ಉತ್ತಮ ಮುನ್ನುಡಿ ಬರೆದು ಕೊಟ್ಟ ಖ್ಯಾತ ಲೇಖಕ ನಾಗೇಶ ಹೆಗಡೆಯವರಿಗೆ: ಸುಂದರ ಮುಖಪುಟ ಮತ್ತು ಪುಸ್ತಕ ವಿನ್ಯಾಸ ಮಾಡಿದ ಉದಯ ಗಾಂವ್ಕರ್, ಎಂ.ರಾಮು ಅವರಿಗೆ; ಸುಂದರವಾಗಿ ಮುದ್ರಣ ಮಾಡಿದ ಚಂದ್ರು ಮತ್ತು ಕ್ರಿಯಾ ಮುದ್ರಣದ ಗೆಳೆಯರಿಗೆ – ನನ್ನ ಕೃತಜ್ಞತೆಗಳು.